Kannada Short Story

Kannada Short Story

Moral Stories
Spread the love

Hi Everyone, Welcome to Moral Storys – Kannada Short Story

1. ಇಬ್ಬರು ಗೆಳೆಯರ ನೆಚ್ಚಿನ ಪಾರಿವಾಳ – Kannada Short Story

Kannada Short Story

ರಾಜು ಮತ್ತು ಮಹೇಶ್ ಎಂಬ ಇಬ್ಬರು ಗೆಳೆಯರಿದ್ದರು. ಬೇಸಿಗೆಯ ರಜಾ ದಿನಗಳಲ್ಲಿ ಮಜಾ ಮಾಡಲು ಒಂದೊಂದು ಪ್ರದೇಶವನ್ನು ಸುತ್ತುತ್ತಾ ಇದ್ದರು. ಹೀಗೆ ಕೆಲವು ದಿನಗಳ ಕಾಲ ಊರೂರು ಸುತ್ತಿ ಸಾಕಾದ ಮೇಲೆ ಒಂದೆರಡು ದಿನ ಮನೆಯಲ್ಲಿ ಉಳಿದರು.

ಎರಡು ದಿನಗಳ ಬಳಿಕ ರಾಜು ಮತ್ತು ಮಹೇಶ್ ಇಬ್ಬರು ಬಿಲ್ಲು ಬಾಣ ತೆಗೆದುಕೊಂಡು ಕಾಡಿಗೆ ಹೋದರು. ದಾರಿಯಲ್ಲಿ ಹೋಗುತ್ತಿದ್ದಾಗ ಮಾವಿನ ಮರದಲ್ಲೊಂದು ಸುಂದರವಾದ ಪಾರಿವಾಳ ಕುಳಿತಿತ್ತು.

ಅದನ್ನು ನೋಡಿದ ರಾಜು ಮತ್ತು ಮಹೇಶ್ ಇಬ್ಬರು ಬಿಲ್ಲು ಬಾಣ ತೆಗೆದು ಮಾವಿನ ಮರದ ಕೊಂಬೆಯ ಮೇಲೆ ಕುಳಿತಿರುವ ಪಾರಿವಾಳಕ್ಕೆ ಬಿಡುತ್ತಾರೆ. ರಾಜು ಬಿಟ್ಟ ಬಾಣ ಗುರಿ ತಪ್ಪುತ್ತದೆ ಆದರೆ ಮಹೇಶನ ಬಾಣ ನೇರವಾಗಿ ಪಾರಿವಾಳ ಎದೆಗೆ ಬಿದ್ದು ಕೆಳಗೆ ಬೀಳುತ್ತದೆ.

ರಾಜು ತಟ್ಟನೆ ಹೋಗಿ ಪಾರಿವಾಳವನ್ನು ಎತ್ತಿ ತಗೊಂಡು ತನ್ನ ಚೀಲದಲ್ಲಿ ಹಾಕಿಕೊಂಡಿದ್ದನ್ನು ನೊಡಿ ಮಹೇಶನು ರಾಜುವಿನ ಮೇಲೆ ಸಿಟ್ಟುಗೊಂಡು “ಇದು ನನ್ನದು, ನಾನು ಗುರಿ ಇಟ್ಟ ಬಾಣದಿಂದ ಗಾಯಗೊಂಡು ಬಿದ್ದಿದೆ” ಎಂದನು.

ಅದಕ್ಕೆ ರಾಜು “ಮೊದಲು ಬಂದು ನಾನು ತೆಗೆದುಕೊಂಡಿದ್ದೇನೆ, ನನ್ನ ಕೈಗೆ ಸಿಕ್ಕಿದೆ, ಹಾಗಾಗಿ ಈ ಪಾರಿವಾಳ ನನ್ನದು” ಎಂತೆಂದನು. ಅದಕ್ಕೆ ಮಹೇಶ್ “ಅದ್ಹೆಂಗಾಗುತ್ತೆ ನಾನು ಬಾಣ‌ ಗುರಿಯಿಟ್ಟು ಹೊಡೆದಿದ್ದಕ್ಕೆ ಅದು ಮೇಲಿಂದ ಕೆಳಗೆ ಬಿತ್ತು, ಅದಕ್ಕೆ ಅದು ನನಗೆ ಸೇರಿದ್ದು” ಎಂದನು.

“ಇಲ್ಲ ಇಲ್ಲ ಅದು ನನಗೆ ಸೇರಿದ್ದು” ಎಂದು ರಾಜು ಹಠ ಹಿಡಿದನು. ಇಬ್ಬರು ಮಧ್ಯೆ ವಾದವಿವಾದ ನಡೆಯಿತು ಬಗೆಹರಿಯಲೇ ಇಲ್ಲ.

Also Read – ಅನುಕರಣೆ (ಸಣ್ಣ ಕಥೆ)

ಅದೇ ಮಾವಿನ ಮರದ ಕೆಳಗೆ ಒಬ್ಬ ಋಷಿಮುನಿ ಕೂತಿದ್ದರು. ರಾಜು ಮತ್ತು ಮಹೇಶ್ ಇಬ್ಬರು ಋಷಿಮುನಿಗಳ ಹತ್ತಿರ ಬಂದು ನಮ್ಮ ಸಮಸ್ಯೆಯನ್ನು ಬಗೆಹರಿಸಿ ಕೊಡಿ ಎಂದು ಕೇಳಿದರು.

ಅದಕ್ಕೆ ಋಷಿ ಮುನಿಗಳು “ನಿಮ್ಮಿಬ್ಬರಲ್ಲಿ ಯಾರು ಆ ಪಾರಿವಾಳವನ್ನು ಮೊದಲಿನ ಸ್ಥಿತಿಗೆ ತರುತ್ತಾರೋ ಅವರೇ ಅರ್ಹರು,  ಅಂತವರು ಮಾತ್ರ ಅದನ್ನು ಹೊಂದಲಿಕ್ಕೆ ಯೋಗ್ಯರು” ಎಂದು ಹೇಳಿದರು.

ಅದಕ್ಕೆ ಇಬ್ಬರು ಕೂಡಲೇ”ಅದು ಹೇಗೆ ಸಾಧ್ಯವಾದಿತು, ನಾವೇನಾದರೂ ದೈವ ಶಕ್ತಿಯನ್ನು ಹೊಂದಿದವರೇ?” ಎಂದು  ಪ್ರಶ್ನಿಸಿದರು.

ಅದಕ್ಕೆ ಋಷಿಮುನಿಗಳು “ಒಂದು ವಸ್ತುವನ್ನು ಸೃಷ್ಟಿಸುವಂತಹ ಶಕ್ತಿ ನಿಮಗೆ ಇಲ್ಲದಿದ್ದಾಗ ಅದನ್ನು ನಾಶ ಪಡಿಸುವಂತಹ ಹಕ್ಕು ಕೂಡ ನಿಮಗೆ ಇಲ್ಲ, ಒಂದು ಜೀವಿಗೆ ರಕ್ಷಣೆ ಕೊಡುವಂತಹ ಮನಸ್ಸು ನಿಮಗೆ ಇಲ್ಲದಿದ್ದಾಗ ಅದಕ್ಕೆ ಹಾನಿ ಮಾಡುವ ಯಾವ ಅಧಿಕಾರವೂ ಕೂಡ ನಿಮಗೆ ಇಲ್ಲ” ಎಂದು ಹೇಳಿದರು.

ಈ ಮಾತಿನಿಂದ ಅವರಿಬ್ಬರ ಮನಕಲುಕಿತು. ಮನರಂಜನೆಗಾಗಿ ತಾವು ಮಾಡಿದ ತಪ್ಪನ್ನು ಅರಿತುಕೊಂಡರು.  ರಾಜು ಮತ್ತು ಮಹೇಶ್ ಇಬ್ಬರು ಗಾಯಗೊಂಡಿರುವ ಪಾರಿವಾಳಕ್ಕೆ ಔಷಧ ಹಚ್ಚಿ ಹಾರಲು ಬಿಟ್ಟರು.

ಕಥೆಯಲ್ಲಿನ ನೀತಿ / Moral of this Story:
ಒಂದು ವಸ್ತುವನ್ನು ಸೃಷ್ಟಿಸುವಂತಹ (ರೂಪಿಸುವ, ನಿರ್ಮಿಸುವ) ಶಕ್ತಿಯಿದ್ದವರಿಗೆ ಮಾತ್ರ ಅದನ್ನು ನಾಶಪಡಿಸುವ ಹಕ್ಕಿರುತ್ತದೆ.

2. ಶ್ರಮದ ಜೀವನ – Kannada Short Story

ಒಂದಾನೊಂದು ಊರಿನಲ್ಲಿ ಸತೀಶ ಎಂಬ ಹುಡುಗ ಇದ್ದನು. ಅವನು ಬಹಳ ಬುದ್ಧಿವಂತ ಮತ್ತು ಯಾವತ್ತಿನ  ಕೆಲಸ ಆವತ್ತೆ ಮುಗಿಸಿ ಬಿಡುತ್ತಿದ್ದ. ಜೀವನದಲ್ಲಿ ಬಹಳ ಶ್ರದ್ಧೆ, ಭಕ್ತಿ ಮತ್ತು ನಿಷ್ಠೆಯನ್ನು ಹೊಂದಿದ್ದನು.

ಒಂದು ದಿನ ಸತೀಶನು ಕಾಯಿಪಲ್ಲೆ ಮಾರುಕಟ್ಟೆಗೆ ಹೋಗಿ ಬರುತ್ತಿದ್ದಾಗ ದಾರಿಯಲ್ಲಿ ಒಬ್ಬ ಋಷಿಮುನಿಗಳು ಪ್ರಜ್ಞೆ ತಪ್ಪಿ ಬಿದ್ದರು. ಇದನ್ನು ನೋಡಿದ ಸತೀಶನು ತಕ್ಷಣವೇ ಋಷಿಮುನಿಗಳ ಮುಖದ ಮೇಲೆ ನೀರು ಚಿಮುಕಿಸಿ ಉಪಚರಿಸಿದನು.

ಋಷಿಮುನಿಗಳು ಸತೀಶನಿಗೆ “ತುಂಬಾ ಧನ್ಯವಾದಗಳು ಮಗನೇ ‌ಸರಿಯಾದ ಸಮಯಕ್ಕೆ ಬಂದು ಸಹಾಯ ಮಾಡಿದಿ” ಎಂದರು. ಆಗ ಸತೀಶನು “ಇದು ನನ್ನ ಕರ್ತವ್ಯ, ಒಬ್ಬ ಮನುಷ್ಯ ಆಪತ್ತಿನಲ್ಲಿ ಇದ್ದಾಗ ಸಹಾಯ ಮಾಡುವುದು ಮಾನವೀಯತೆ” ಎಂದು ಹೇಳಿದನು.‌

ಆಗ ಋಷಿಮುನಿ “ಮಗನೇ ಜೀವನ ಕಠಿಣ ಇದೆ, ಮುಂಬರುವ ದಿನಗಳಲ್ಲಿ ಬರಗಾಲ ಬರುವ ಸಾಧ್ಯತೆ ಇದೆ” ಎಂದು ಭವಿಷ್ಯ ನುಡಿದು ಹೊರಡುತ್ತಾನೆ.

Also Read – ದುರಾಸೆಯ ನರಿ (ಸಣ್ಣ ಕಥೆ)

ಮರುದಿನ  ಸತೀಶನು ತನ್ನ ಗೆಳೆಯರಲ್ಲಿಗೆ ಹೋಗಿ ನಿನ್ನೆ ನಡೆದ ಸಂಗತಿಯನ್ನೆಲ್ಲಾ ಹೇಳುತ್ತಾನೆ.‌ ಅದರಲ್ಲಿ ಮುಖ್ಯವಾಗಿ ಬರಗಾಲದ ಬಗ್ಗೆ ಹೇಳಿದಾಗ ಅವನ‌‌ ಸ್ನೇಹಿತರು ತಲೆಕೆಡಿಸಿಕೊಳ್ಳದೆ ತಾತ್ಸಾರ ಮಾಡುತ್ತಾರೆ.

ಸತೀಶನ ಗೆಳೆಯರು ಸೋಮಾರಿಗಳಾಗಿರುತ್ತಾರೆ. ಯಾರು ಕೂಡ ಕಷ್ಟಪಟ್ಟು ದುಡಿಯುವಂತಹ ಮನಸ್ಥಿತಿಯಲ್ಲಿರುವುದಿಲ್ಲ.

ಒಂದು ದಿನ ಸತೀಶನು ಹೊಲದಲ್ಲಿ ಬೀಜ ಬಿತ್ತಲು ತನ್ನ ಸ್ನೇಹಿತರನ್ನು ಕರೆಯುತ್ತಾನೆ ಅದಕ್ಕೆ ಆವನ ಗೆಳೆಯರು ನಿರಾಕರಿಸುತ್ತಾರೆ. “ನಮ್ಮ ಕೈಯಲ್ಲಿ ಕೆಲಸ ಮಾಡಲು ಆಗುವುದಿಲ್ಲ” ಎನ್ನುತ್ತಾರೆ. ಬದಲಾಗಿ ಪಟ್ಟಣಕ್ಕೆ ಹೋಗಿ ಸಿನಿಮಾ ನೋಡಿ ಬರಲು ಹೋಗುತ್ತಾರೆ. ಸತೀಶನೊಬ್ಬನೆ  ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡಲು ಮುಂದಾಗುತ್ತಾನೆ.

ಎರಡು ತಿಂಗಳು ಆದ ಮೇಲೆ ಬೆಳೆಗೆ ಗೊಬ್ಬರ ಹಾಕಲು ಮತ್ತೆ ತನ್ನ ಸ್ನೇಹಿತರ ಸಹಾಯ ಕೇಳುತ್ತಾನೆ ಅದಕ್ಕೆ ಅವನ ಸ್ನೇಹಿತರು ನಮಗೆ ಆರೋಗ್ಯ ಸರಿ ಇಲ್ಲ ಎಂದು ತಪ್ಪಿಸಿಕೊಳ್ಳುತ್ತಾರೆ.

ಆಗ ಅವನೊಬ್ಬನೇ ಹೊಲಕ್ಕೆ ಹೋಗಿ ಗೊಬ್ಬರ ಹಾಕುತ್ತಾನೆ ಮತ್ತು ಬೆಳೆ ಅಧಿಕ ಇಳುವರಿ ಬರುವಂತೆ ಸರಿಯಾದ ಸಮಯಕ್ಕೆ ಎಣ್ಣೆ ಸಿಂಪಡಿಸಿ ಜೋಪಾನ ಮಾಡುತ್ತಾನೆ.

ಬೆಳೆ ಕಟಾವು ಮಾಡುವ ಸಮಯ ಬಂತು ಅದಕ್ಕಾಗಿ ಮತ್ತೆ ಸತೀಶನು ತನ್ನ ಸ್ನೇಹಿತರ ಸಹಾಯ ಕೇಳಿದ ಅದಕ್ಕೆ ಸ್ನೇಹಿತರು “ಇವತ್ತು ನಾನು ಉಪವಾಸ ಇದ್ದೇನೆ” ಎಂದು ಒಬ್ಬೊಬ್ಬರು ಒಂದೊಂದು ನೆಪ ಹೇಳಿ ಜಾರಿಕೊಂಡರು ಜೊತೆಗೆ ಇವನ ಹುಚ್ಚು ದುಡಿಮೆಗೆ ಗೇಲಿ ಮಾಡುತ್ತಿದ್ದರು.

ಆದರೆ ಸತೀಶನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ತಾನು ಮಾಡುತ್ತಾ ಸಾಗಿದನು. ಬೆಳೆಯನ್ನು ಕಟಾವು ಮಾಡಿ, ರಾಶಿ ಮಾಡಿದನು. ನೂರು ಚೀಲಗಳಿಗೆ ದವಸ ಧಾನ್ಯವನ್ನು ತುಂಬಿ, ಅದರಲ್ಲಿ ಮೂವತ್ತು ಚೀಲಗಳನ್ನು ಮಾರಿ ಸಾಕಷ್ಟು ಲಾಭ ಗಳಿಸಿದನು. ಇನ್ನುಳಿದ ಎಪ್ಪತ್ತು ಚೀಲಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟನು.

ಹೀಗೆ ಸತೀಶನು ಕಷ್ಟಪಟ್ಟು ಹೊಲ ಮಾಡಿ ಕೈತುಂಬಾ ಹಣ ಮತ್ತು ಮನೆ ತುಂಬಾ ದವಸಧಾನ್ಯ ಸಂಗ್ರಹಿಸಿಟ್ಟನು. ಇದನ್ನು ನೋಡಿ ಅವನ ಸ್ನೇಹಿತರು ಅಸೂಯೆ ಪಟ್ಟರು.

ಆರು ತಿಂಗಳಾದ ಮೇಲೆ ಆ ಊರಿನಲ್ಲಿ ಭೀಕರ ಬರಗಾಲ ಉಂಟಾಯಿತು. ಜನರು ಒಂದು ತುತ್ತು ಅನ್ನಕ್ಕೂ ಪರದಾಡುವಂತಹ ಕಠಿಣ ಪರಿಸ್ಥಿತಿ ಎದುರಾಯಿತು.

Also Read – ನರಿ ಮತ್ತು ಇಲಿಗಳು

ಆದರೆ ಸತೀಶನು ಮಾತ್ರ ಯಾವುದಕ್ಕೂ ಕಡಿಮೆಯಿಲ್ಲದಂತೆ ಸುಖ ಸಂತೋಷದಿಂದ ನೆಮ್ಮದಿಯಿಂದ ಜೀವಿಸುತ್ತಿದ್ದನು. ಅವನ‌ ಸ್ನೇಹಿತರು ಮತ್ತು ಊರಿನ ಜನರೆಲ್ಲಾ ಸತೀಶನ ಮನೆಯ ಮುಂದೆ ಆಹಾರಕ್ಕಾಗಿ ಸಾಲುಗಟ್ಟಿದರು.

ಕಥೆಯಲ್ಲಿನ ನೀತಿ / Moral of this Story:

  • ವಯಸ್ಸಿದ್ದಾಗ ಕಷ್ಟಪಟ್ಟು ದುಡಿದರೆ ಮುಪ್ಪಿನ ಕಾಲದಲ್ಲಿ ಸಂತೋಷದಿಂದ ಜೀವಿಸಬಹುದು. ‌
  • ಆಳಾಗಿ ದುಡಿದವನು ಅರಸನಾಗಿ ಉಣ್ಣುವನು

3. ಸಾಧನೆಯ ಹಾದಿ – Kannada Short Story

ಒಂದು ಪುಟ್ಟ ಗ್ರಾಮದಲ್ಲಿ ಸುರೇಶ ಎಂಬ ಹುಡುಗ ಇದ್ದನು. ಅವರ ತಂದೆ ತಾಯಿ ಆರ್ಥಿಕವಾಗಿ ಬಡವರಾಗಿದ್ದರು. ಅವರಿಗೆ ಒಂದು ಸಣ್ಣ ಗುಡಿಸಲು ಇತ್ತು. ಅದು ಮಳೆಗಾಲದಲ್ಲಿ ಸೋರುತ್ತಿತ್ತು.

ಸುರೇಶ ಜೀವನದಲ್ಲಿ ಏಗಾದರೂ ಮಾಡಿ ಉನ್ನತ ಹಂತಕ್ಕೆ ಹೋಗಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದನು.

ಸುರೇಶ ಶಾಲೆಗೆ ಹೋಗುತ್ತಿದ್ದಾಗ ರಮೇಶ ಎಂಬ ಗೆಳೆಯ ಪರಿಚಯವಾದ. ಸುರೇಶ ಮತ್ತು ರಮೇಶ ಇಬ್ಬರು ಆತ್ಮೀಯ ಸ್ನೇಹಿತರಾದರು. ಎಲ್ಲಿಗೆ ಹೋದರೂ ಜೋತೆಯಾಗಿ ಹೋಗುತ್ತಿದ್ದರು. ಏನೂ ಮಾಡಿದರೂ ಜೊತೆಯಲ್ಲೇ ಮಾಡುತ್ತಿದ್ದರು.

ಇಬ್ಬರು ಜೊತೆಗೂಡಿಯೇ ಶಾಲೆಗೆ ಹೋಗುತ್ತಿದ್ದರು. ಸುರೇಶ ಶಾಲೆಯ ಆಟದಲ್ಲಿ ಮುಂದಿದ್ದ, ಆದರೆ ಓದುವುದರಲ್ಲಿ ದಡ್ಡನಾಗಿದ್ದನು. ರಮೇಶನು ಶಾಲೆಯ ಎಲ್ಲಾ ಆಟದಲ್ಲೂ ಪಾಟದಲ್ಲೂ  ಚುರುಕಾಗಿದ್ದ, ಆದರೆ ರಮೇಶ ‘ಎಲ್ಲರಿಗಿಂತ ನಾನೇ ಬುದ್ಧಿವಂತ’ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದನು.

ಒಂದು ದಿನ ಸುರೇಶನ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದರು. ಅವತ್ತಿನಿಂದ ಸುರೇಶನೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಯಿತು. ಗಾರೆ ಕೆಲಸಕ್ಕೆ ಹೋಗಿ ತನ್ನ ಜೀವನ ನಡೆಸುತ್ತಿದ್ದ.  ಅದಕ್ಕಾಗಿ ಸುರೇಶ ಶಾಲೆಗೆ ಸರಿಯಾಗಿ ಹೋಗಲಿಲ್ಲ.

ಸುರೇಶ ಶಾಲೆಗೆ ಸರಿಯಾಗಿ ಹೋಗದ ಕಾರಣ ಅಂತಿಮ ಪರೀಕ್ಷೆಯಲ್ಲಿ ಫೇಲಾದ. ರಮೇಶ ಪರೀಕ್ಷೆಯಲ್ಲಿ ಪಾಸಾಗಿ ಮುಂದಿನ ವ್ಯಾಸಂಗಕ್ಕೆ ಹೋದನು.

Also Read – ಮೂರು ಕಾಗೆಗಳು

ಸುರೇಶ ತಾನು ಗಾರೆ ಕೆಲಸ ಮಾಡಿ ಬಂದ ದುಡ್ಡಿನಿಂದ ತಂದೆಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ, ಒಂದು ತಿಂಗಳಿಗೆ ಆಗುವ ಮಾತ್ರೆ ಕೊಟ್ಟು ಪಟ್ಟಣಕ್ಕೆ ಹೋಗುತ್ತಾನೆ.

ಪಟ್ಟಣದಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಕಂಪನಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಎಲ್ಲಾರ ಮೆಚ್ಚುಗೆಗೆ ಪಾತ್ರನಾದನು. ಅವನು  ಹಗಲಿರುಳು ಕಷ್ಟಪಟ್ಟು ದುಡಿದು ಕೈತುಂಬಾ ಸಂಪಾದಿಸಿ ತನ್ನ ಸ್ವಂತ ಊರಿಗೆ ‌ಬಂದನು.

ಹಳೆ ಗುಡಿಸಲು ಕಿತ್ತು ಹಾಕಿ ಅದೇ ಜಾಗದಲ್ಲಿ ಹೊಸ ಮನೆ ಕಟ್ಟಿಕೊಂಡ. ಸುರೇಶ ತನ್ನ ತಂದೆಗೆ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲು ಕೆಲವೇ ದಿನಗಳಲ್ಲಿ ಗುಣಮುಖರಾದರು. 

ಸುರೇಶನು ಊರಲ್ಲೇ ಒಂದು ಸ್ವಂತವಾಗಿ ಹೋಟೆಲನ್ನು ಪ್ರಾರಂಭಿಸಿದನು. ಪ್ರಾರಂಭದಲ್ಲಿ ಸ್ವಲ್ಪ ಕಷ್ಟವಾದರೂ ಹೂಡಿಕೆ ಮಾಡಿದ ಆರು ತಿಂಗಳಲ್ಲೇ ದುಪ್ಪಟ್ಟು ಲಾಭ ಪಡೆದನು.

ಹೀಗೆ ಅವನ ವ್ಯಾಪಾರ ಲಾಭದಾಯಕವಾಗಿ ಸಾಗುತ್ತಿದ್ದಂತೆಲ್ಲಾ ಅವನ ವ್ಯವಹಾರ ವಿಸ್ತಾರವಾಗುತ್ತಾ ಹೋಯಿತು. ಅವನ ಕೈ ಕೆಳಗೆ ಹತ್ತಾರು ಜನರು ಕೆಲಸಕ್ಕೆ ಇಟ್ಟುಕೊಂಡನು.

ಶಿಕ್ಷಣದ ಕೊರತೆಯಿಂದ ಯಾರೂ ವಂಚಿತರಾಗಬಾರದೆಂದು  ಉಚಿತ ಪ್ರಾಥಮಿಕ ಶಿಕ್ಷಣ ನೀಡಲು ಶಾಲೆಯೊಂದನ್ನು ಆರಂಭಿಸುತ್ತಾನೆ. ಹಲವಾರು ನಿರುದ್ಯೋಗಿಗಳಿಗೆ ಕೆಲಸ ಕೊಡುವುದರ ಜೊತೆಗೆ ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ಊರಿನ ಯಾರೊಬ್ಬರೂ ಕೂಡಾ ಅನಾರೋಗ್ಯದಿಂದ ನರಳಬಾರದೆಂದು ಆಸ್ಪತ್ರೆಯನ್ನು ಸ್ಥಾಪಿಸಲು ಮುಂದಾಗುತ್ತಾನೆ. ಹೀಗೆ ಇಡೀ ಜಿಲ್ಲೆಗೆ ಒಬ್ಬ ಆದರ್ಶ ವ್ಯಕ್ತಿಯಾಗಿ ಬಾಳುತ್ತಾನೆ.

ಕಥೆಯಲ್ಲಿನ ನೀತಿ / Moral of this Story :
ಎಲ್ಲಿ ಸಾಧಿಸುವ ಮನಸ್ಸು ಇರುತ್ತದೋ ಅಲ್ಲಿ ಸಾಧನೆಯ ಹಾದಿ ಇರುತ್ತದೆ.
ಕಷ್ಟಗಳು, ಕಠಿಣ ಪರಿಸ್ಥಿತಿಗಳು ಬಂದೊದಗುವುದು ನಮ್ಮ ಜೀವಿತವನ್ನು ಪುಟವಿಡುವುದಕ್ಕಾಗಿಯೇ.

Follow Our Facebook Page – Moral Storys


Spread the love

1 thought on “Kannada Short Story

Leave a Reply

Your email address will not be published. Required fields are marked *